(ಸೆಪ್ಟೆಂಬರ್ 02, 2016 ರ ವರೆಗೆ ಪರಿಷ್ಕೃತ ಗೊಳಿಸಲಾಗಿದೆ)
( ಇದು ಭಾರತೀಯ ರಿಸರ್ವ್ ಬ್ಯಾಂಕಿನ ನಿಮ್ಮ ಗ್ರಾಹಕರನ್ನು ತಿಳಿಯಿರಿ ಮಾರ್ಗಸೂಚಿಗಳ ಸರಳೀಕೃತ ಮತ್ತು ಸಂಕ್ಷಿಪ್ತವಾದ ಆವೃತ್ತಿ)
1. ಕೆ ವೈ ಸಿ ಎಂದರೇನು ? ಅದು ಏಕೆ ಅಗತ್ಯವಿದೆ ?
ಪ್ರತಿಕ್ರಿಯೆ : ಕೆ ವೈ ಸಿ ಎಂದರೆ “ನಿಮ್ಮ ಗ್ರಾಹಕರನ್ನು ತಿಳಿಯಿರಿ” (know Your Customer ). ಇದು ಬ್ಯಾಂಕುಗಳು ಗ್ರಾಹಕರ ವಿಳಾಸ ಮತ್ತು ಅವರ ಗುರುತಿನ ಬಗ್ಗೆ ಮಾಹಿತಿ ಪಡೆಯುವ ಒಂದು ಪ್ರಕ್ರಿಯೆ ಆಗಿದೆ. ಈ ಪ್ರಕ್ರಿಯೆಯು ಬ್ಯಾಂಕುಗಳ ಸೇವೆಗಳು ದುರ್ಬಳಕೆ ಆಗದಂತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಖಾತೆಗಳನ್ನು ತೆರೆಯುವ ಸಂದರ್ಭದಲ್ಲಿ ಬ್ಯಾಂಕುಗಳು ಕೆ ವೈ ಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಬ್ಯಾಂಕುಗಳು ಸಹ ನಿಯತಕಾಲಿಕವಾಗಿ ಗ್ರಾಹಕರ 'ಕೆವೈಸಿ ವಿವರಗಳನ್ನು ಪರಿಷ್ಕರಣೆಗೊಳಿಸುವ ಅಗತ್ಯವಿದೆ.
2. ಒಂದು ಬ್ಯಾಂಕ್ ಖಾತೆಯನ್ನು ತೆರೆಯುವಾಗ ಯಾವ ಕೆವೈಸಿ ದಾಖಲೆಗಳ ಅಗತ್ಯವಿದೆ ?
ಪ್ರತಿಕ್ರಿಯೆ : ಒಂದು ಬ್ಯಾಂಕ್ ಖಾತೆಯನ್ನು ತೆರೆಯಲು , ಇತ್ತೀಚಿನ ಭಾವಚಿತ್ರದ ಜೊತೆಗೆ ಗುರುತು ಮತ್ತು ವಿಳಾಸದ ಪುರಾವೆಗಳನ್ನು ಒದಗಿಸುವ ಅಗತ್ಯವಿದೆ.
3. ಗುರುತಿನ ಪ್ರಮಾಣ ಮತ್ತು ವಿಳಾಸದ ಪುರಾವೆಗಳಿಗೆ ಯಾವ ದಾಖಲೆಗಳನ್ನು ನೀಡುವ ಅಗತ್ಯವಿದೆ ?
ಪ್ರತಿಕ್ರಿಯೆ : ಭಾರತ ಸರ್ಕಾರವು ಗುರುತಿನ ಪುರಾವೆಯ ಉದ್ದೇಶಕ್ಕಾಗಿ ಆರು ದಾಖಲೆಗಳನ್ನು “ಅಧಿಕೃತವಾಗಿ ಸಿಂಧುವಾದ ದಾಖಲೆ” (Officially Valid Documents ) ಎಂದು ಗುರುತಿಸಿದೆ. ಆ ಆರು ದಾಖಲೆಗಳು ಯಾವುದೆಂದರೆ , ಪಾಸ್ ಪೋರ್ಟ್ , ಡ್ರೈವಿಂಗ್ ಲೈಸೆನ್ಸ್ , ಮತದಾರರ ಗುರುತಿನ ಚೀಟಿ , ಪ್ಯಾನ್ ಕಾರ್ಡ್ , ಯು. ಐ . ಡಿ. ಐ ನಿಂದ ನೀಡಲ್ಪಟ್ಟ ಆಧಾರ್ ಪತ್ರ ಮತ್ತು ಎನ್ ಆರ್ ಈ ಜಿ ಏ ಯಿಂದ ನೀಡಲಾಗಿರುವ ಜಾಬ್ ಕಾರ್ಡ್ . ನೀವು ಗುರುತಿನ ಪುರಾವೆಯಾಗಿ ಈ ದಾಖಲೆಗಳಲ್ಲಿ ಯಾವುದೇ ಒಂದನ್ನು ಸಲ್ಲಿಸುವ ಅಗತ್ಯವಿದೆ. ಈ ದಾಖಲೆಗಳು ನಿಮ್ಮ ವಿಳಾಸದ ವಿವರಗಳನ್ನೂ ಸಹ ಹೊಂದಿದ್ದರೆ ಅವುಗಳು ”ವಿಳಾಸದ ಪುರಾವೆಯಾಗಿ ” ಕೂಡ ಸ್ವೀಕೃತಿಯಾಗುತ್ತದೆ. ಒಂದು ವೇಳೆ ಗುರುತಿನ ಪುರಾವೆಯಾಗಿ ನೀಡಿರುವ ದಾಖಲೆಗಳಲ್ಲಿ ವಿಳಾಸದ ವಿವರಗಳು ಇಲ್ಲದಿದ್ದಲ್ಲಿ ನೀವು ವಿಳಾಸದ ವಿವರಗಳನ್ನು ಹೊಂದಿರುವ ಮತ್ತೊಂದು ಅಧಿಕೃತವಾಗಿ ಸಿಂಧುವಾದ ದಾಖಲೆಯನ್ನು ಸಲ್ಲಿಸುವ ಅಗತ್ಯವಿರುತ್ತದೆ
4. ಒಂದು ವೇಳೆ ನನ್ನ ಹತ್ತಿರ ಈ ಮೇಲಿನ ಯಾವುದೇ ಪುರಾವೆಗಳು ಇಲ್ಲದ ಪಕ್ಷದಲ್ಲಿ ನಾನು ಬ್ಯಾಂಕ್ ಖಾತೆಯನ್ನು ತೆರೆಯಬಹುದೆ ? .
ಪ್ರತಿಕ್ರಿಯೆ : ಹೌದು. ನೀವು ನಿಮ್ಮ ಇತ್ತೀಚಿನ ಭಾವಚಿತ್ರವನ್ನು ಸಲ್ಲಿಸಿ ಬ್ಯಾಂಕ್ ಅಧಿಕಾರಿಯ ಉಪಸ್ಥಿತಿಯಲ್ಲಿ ನಿಮ್ಮ ಸಹಿ ಅಥವಾ ಹೆಬ್ಬೆಟ್ಟಿನ ಗುರುತು ಹಾಕುವ ಮೂಲಕ 'ಸಣ್ಣ ಖಾತೆ' ಎಂಬ ಬ್ಯಾಂಕ್ ಖಾತೆಯನ್ನು ತೆರೆಯಬಹುದು.
5. 'ಸಣ್ಣ ಖಾತೆ' ಮತ್ತು ಇತರ ಖಾತೆಗಳ ನಡುವೆ ಯಾವುದೇ ವ್ಯತ್ಯಾಸವಿದೆಯೆ?
ಪ್ರತಿಕ್ರಿಯೆ : ಹೌದು. “ಸಣ್ಣ ಖಾತೆಗಳು “ ಈ ಕೆಳಗಿನ ಮಿತಿಗಳನ್ನು ಹೊಂದಿವೆ
-
ಯಾವುದೇ ಸಮಯದಲ್ಲಿ ಸಣ್ಣ ಖಾತೆಯ ಶಿಲ್ಕು ರೂ. 50000/- ದಾಟಬಾರದು
-
ಒಂದು ವರ್ಷದ ಅವಧಿಯಲ್ಲಿ ಖಾತೆಗೆ ರೂ. 100000/- ಕ್ಕಿಂತ ಹೆಚ್ಚು ಮೊತ್ತ ಜಮಾ ಆಗಿರಬಾರದು.
-
ಒಂದು ತಿಂಗಳಲ್ಲಿ ಒಟ್ಟು ವಾಪಸಾತಿ ಮತ್ತು ವರ್ಗಾವಣೆ Rs.10,000 ಮೀರಬಾರದು
-
ವಿದೇಶಿ ಪಾವತಿಯನ್ನು ಈ ಖಾತೆಗೆ ಜಮಾ ಮಾಡುವಂತಿಲ್ಲ.
ಇಂತಹ ಖಾತೆ ಆರಂಭದ ಹನ್ನೆರಡು ತಿಂಗಳ ಕಾಲ ಚಾಲ್ತಿಯಲ್ಲಿರುತ್ತದೆ ನಂತರ , ಅಂತಹ ಖಾತೆಯನ್ನು ಹೊಂದಿರುವ ವ್ಯಕ್ತಿ ಅಂತಹ ಖಾತೆಯನ್ನು ತೆರೆದ ಹನ್ನೆರಡು ತಿಂಗಳ ಒಳಗೆ ಅಧಿಕೃತ ದಾಖಲೆಗಾಗಿ ಅರ್ಜಿ ಸಲ್ಲಿಸಿದ ಬಗ್ಗೆ ಬ್ಯಾಂಕಿಗೆ ಪುರಾವೆ ನೀಡಿದಲ್ಲಿ ಇನ್ನೂ ಹನ್ನೆರಡು ತಿಂಗಳ ಕಾಲ ಖಾತೆ ಚಾಲ್ತಿಯಲ್ಲಿರುತ್ತದೆ.
6. ಅಧಿಕೃತ ಸಿಂಧುತ್ವ ದಾಖಲೆಗಳು ನನ್ನ ಹತ್ತಿರ ಇಲ್ಲದ ಪಕ್ಷದಲ್ಲಿ ಸಣ್ಣ ಖಾತೆಗಳ ಪ್ರಕರಣಗಳಲ್ಲಿ ಇರುವಂತಹ ಮಿತಿಗೆ ಒಳಪಡದಂತಹ ಬ್ಯಾಂಕ್ ಖಾತೆಯನ್ನು ನಾನು ಹೊಂದಬಹುದೆ ?
ಪ್ರತಿಕ್ರಿಯೆ : ಈ ಕೆಳಗಿನ ಯಾವುದೇ ಒಂದು ಗುರುತಿನ ಪ್ರಮಾಣ ಪತ್ರದ ಪ್ರತಿಯನ್ನು ನೀಡಿ ಸಾಮಾನ್ಯ ಖಾತೆಯನ್ನು ತೆರೆಯಬಹುದು.
I) ಕೇಂದ್ರ / ರಾಜ್ಯ ಸರ್ಕಾರದ ಇಲಾಖೆಗಳು, ಶಾಸನಬದ್ಧ / ನಿಯಂತ್ರಕ ಪ್ರಾಧಿಕಾರಗಳು ಸಾರ್ವಜನಿಕ ಕ್ಷೇತ್ರಗಳ ಉದ್ಯಮಗಳಲ್ಲಿ ವಾಣಿಜ್ಯ ಬ್ಯಾಂಕ್ ಗಳಿಂದ , ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ನೀಡಲ್ಪಟ್ಟ ವ್ಯಕ್ತಿಯ ಛಾಯಾಚಿತ್ರವಿರುವ ಗುರುತಿನ ಚೀಟಿ
ಅಥವಾ
II) ಗೆಜೆಟ್ಟೆಡ್ ಅಧಿಕಾರಿಯು ಅಧಿಕೃತವಾಗಿ ದೃಢೀಕರಿಸಿದ ಛಾಯಾಚಿತ್ರ ಸಹಿತ ನೀಡಿದ ಪತ್ರ
ವಿಳಾಸದ ಪುರಾವೆಯಾಗಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬಹುದು
-
ಎರಡು ತಿಂಗಳ ಅವಧಿಯೊಳಗಿರುವ ವಿದ್ಯುತ್ ಬಿಲ್ , ದೂರವಾಣಿ , ಪೋಸ್ಟ್ – ಪೇಡ್ ಮೊಬೈಲ್ ಬಿಲ್ , ಕೊಳವೆ ಗ್ಯಾಸ್ ಮತ್ತು ನೀರಿನ ಬಿಲ್ ಮುಂತಾದ ಯುಟಿಲಿಟಿ ಬಿಲ್.
-
ಆಸ್ತಿ ಅಥವಾ ಮುನ್ಸಿಪಲ್ ನಿಂದ ನೀಡಿರುವ ತೆರಿಗೆ ಸ್ವೀಕೃತಿ ಪತ್ರ
-
ಬ್ಯಾಂಕ್ ಖಾತೆ ಅಥವಾ ಅಂಚೆ ಕಛೇರಿ ಉಳಿತಾಯ ಬ್ಯಾಂಕ್ ಖಾತೆಯ ವಿವರಣಾ ಪಟ್ಟಿ
-
ಸರ್ಕಾರಿ ಇಲಾಖೆಗಳು ಅಥವಾ ಸಾರ್ವಜನಿಕ ಕ್ಷೇತ್ರಗಳ ಉದ್ಯಮಗಳಿಂದ ನಿವೃತ್ತ ನೌಕರರಿಗೆ ನೀಡಲ್ಪಟ್ಟ ವಿಳಾಸ ಹೊಂದಿರುವ ಪಿಂಚಣಿ ಅಥವಾ ಕುಟುಂಬ ಪಿಂಚಣಿ ಪಾವತಿ ಆದೇಶ (PPO) .
-
ರಾಜ್ಯ ಅಥವಾ ಕೇಂದ್ರ ಸರ್ಕಾರದ ಇಲಾಖೆಗಳು, ಶಾಸನಬದ್ಧ ಅಥವಾ ನಿಯಂತ್ರಣ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ವಾಣಿಜ್ಯ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳಿಂದ ನೀಡಲ್ಪಟ್ಟಿರುವ ವಸತಿ ನೀಡಿಕೆ ಪತ್ರ . ಹಾಗೆಯೇ , ಮಾಲಿಕರಿಂದ ನೀಡಲ್ಪಟ್ಟಿರುವ ವಸತಿ ನೀಡಿಕೆ ಲೀವ್ ಅಂಡ್ ಲೈಸೆನ್ಸ್ ಒಪ್ಪಂದ ಪತ್ರ .
-
ವಿದೇಶಿ ಅಧಿಕಾರವ್ಯಾಪ್ತಿಯ ಸರ್ಕಾರದ ಇಲಾಖೆಗಳು ಅಥವಾ ಭಾರತದಲ್ಲಿರುವ ವಿದೇಶಿ ರಾಯಭಾರಿ ಅಥವಾ ಮಿಷನ್ ನಿಂದ ನೀಡಲ್ಪಟ್ಟಿರುವ ದಾಖಲೆ ಪತ್ರಗಳು.
ಇದು ಒಂದು ಸಾಮಾನ್ಯ ನಿಯಮವಲ್ಲ ಹಾಗೂ ಈ ಸರಳೀಕೃತ ವಿಧಾನವನ್ನು ಯಾವ ಗ್ರಾಹಕರಿಗೆ ಅಳವಡಿಸಬಹುದೆಂಬ ನಿರ್ಣಯವನ್ನು ಆಯಾ ಬ್ಯಾಂಕ್ ಗಳಿಗೆ ಬಿಡಲಾಗಿದೆ
7. ನಾನು ನನ್ನ ಹೆಸರನ್ನು ಬದಲಾಯಿಸಿದರೆ ಮತ್ತು ನನ್ನ ಈ ಹೊಸ ಹೆಸರಿನಲ್ಲಿ ಯಾವುದೇ ರೀತಿಯ ಅಧಿಕೃತ ದಾಖಲೆಗಳು ಇಲ್ಲದಿದ್ದ ಸಂದರ್ಭದಲ್ಲಿ ನಾನು ಖಾತೆಯನ್ನು ಹೇಗೆ ತೆರೆಯಬಹುದು ?
ಪ್ರತಿಕ್ರಿಯೆ : ಯಾವುದೇ ವ್ಯಕ್ತಿ ಮದುವೆ ಅಥವಾ ಇನ್ಯಾವುದೇ ಕಾರಣದಿಂದ ತನ್ನ ಹೆಸರನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ನೀಡಲ್ಪಟ್ಟಿರುವ ಮದುವೆ ಪ್ರಮಾಣಪತ್ರದ ಪ್ರತಿ ಅಥವಾ ಹಳೆಯ ಹೆಸರಿನಲ್ಲಿರುವ ಅಧಿಕೃತವಾಗಿ ದೃಢೀಕರಿಸಿದ ದಾಖಲೆಯೊಂದಿಗೆ , ವ್ಯಕ್ತಿಯ ಹೆಸರಿನ ಬದಲಾವಣೆಯ ಬಗ್ಗೆ ರಾಜ್ಯ ಪತ್ರ ಪ್ರಕಟಣೆಯನ್ನು ಖಾತೆ ತೆರೆಯುವಾಗ ಸಲ್ಲಿಸ ತಕ್ಕದ್ದು.
8. ಗ್ರಾಹಕರನ್ನು ಸಂಭಾವ್ಯ ನಷ್ಟದ ಮೌಲ್ಯಾಧಾರದ ಮೇಲೆ ಬ್ಯಾಂಕುಗಳು ವರ್ಗೀಕರಿಸುವ ಅಗತ್ಯವಿದೆಯೇ ?
ಪ್ರತಿಕ್ರಿಯೆ : ಹೌದು. ಬ್ಯಾಂಕುಗಳು ಅಕ್ರಮ ಹಣ ವರ್ಗಾವಣೆ ಪ್ರತಿಬಂಧಕದ (AML) ಆಧಾರಿತವಾಗಿ ತನ್ನ ಗ್ರಾಹಕರನ್ನು “ಕಡಿಮೆ” , “ಮಧ್ಯಮ” ಮತ್ತು “ಹೆಚ್ಚಿನ” ಸಂಭಾವ್ಯ ನಷ್ಟದ ಗ್ರಾಹಕರೆಂದು ವರ್ಗೀಕರಿಸುವ ಅಗತ್ಯವಿದೆ.
9. ಬ್ಯಾಂಕುಗಳು ಸಂಭಾವ್ಯ ನಷ್ಟ ವರ್ಗೀಕರಣದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತದೆಯೆ ?
ಪ್ರತಿಕ್ರಿಯೆ : ಇಲ್ಲ
10. ನಾನು ಖಾತೆಯನ್ನು ತೆರೆಯುವಾಗ ನನ್ನ ಬ್ಯಾಂಕು ಕೋರಿದ ಕೆ ವೈ ಸಿ ದಾಖಲೆಗಳನ್ನು ನೀಡಲು ನಾನು ನಿರಾಕರಿಸಿದರೆ ಉಂಟಾಗುವ ಪರಿಣಾಮವೇನು ?
ಪ್ರತಿಕ್ರಿಯೆ : ಅಂತಹ ಸಂದರ್ಭದಲ್ಲಿ ನಿಮ್ಮ ಖಾತೆಯನ್ನು ತೆರೆಯಲು ಬ್ಯಾಂಕಿಗೆ ಸಾಧ್ಯವಾಗುವುದಿಲ್ಲ
11. ಕೇವಲ ಆಧಾರ್ ಕಾರ್ಡ್ ನಿಂದ ನಾನು ಬ್ಯಾಂಕ್ ಖಾತೆಯನ್ನು ತೆರೆಯಬಹುದೆ ?
ಪ್ರತಿಕ್ರಿಯೆ : ಹೌದು. ಆಧಾರ್ ಕಾರ್ಡ್ ನ್ನು ಗುರುತು ಮತ್ತು ವಿಳಾಸ ಎರಡಕ್ಕೂ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ .
12. ಖಾತೆಯನ್ನು ತೆರೆಯುವಾಗ ಆಧಾರ್ ಕಾರ್ಡ್ ಒದಗಿಸುವುದು ಕಡ್ಡಾಯವೆ ?
ಪ್ರತಿಕ್ರಿಯೆ : ಇಲ್ಲ , ನೀವು ಆಧಾರ್ ಕಾರ್ಡ್ ಅಥವಾ ಇತರೆ ಐದು ಅಧಿಕೃತವಾಗಿ ಸಿಂಧುವಾದ ದಾಖಲೆಯಲ್ಲಿ ಒಂದನ್ನು ನೀಡಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು .
13. ಇ – ಕೆ ವೈ ಸಿ ಎಂದರೇನು ? ಇ – ಕೆ ವೈ ಸಿ ಹೇಗೆ ಕಾರ್ಯನಿರ್ವಹಿಸುತ್ತದೆ ?
ಪ್ರತಿಕ್ರಿಯೆ : ಇ – ಕೆ ವೈ ಸಿ ಎಂದರೆ ಎಲೆಕ್ಟ್ರಾನಿಕ್ ಕೆವೈಸಿ
ಇ-ಕೆವೈಸಿ ಆಧಾರ್ ಸಂಖ್ಯೆಗಳನ್ನು ಹೊಂದಿರುವವರಿಗೆ ಮಾತ್ರ ಸಾಧ್ಯ. ಇ-ಕೆವೈಸಿ ಸೇವೆಯನ್ನು ಬಳಸಲು ಅಧಿಕೃತ ಬಯೋ ಮೆಟ್ರಿಕ್ ಮುಖಾಂತರ ನಿಮ್ಮ ಗುರುತು / ವಿಳಾಸವನ್ನು ಬ್ಯಾಂಕು ಶಾಖೆ / ವ್ಯವಹಾರ ಪ್ರತಿನಿಧಿಗಳಿಗೆ ಬಿಡುಗಡೆ ಮಾಡಲು ಯು ಐ ಡಿ ಏ ಐ ಗೆ ಅಧಿಕಾರವನ್ನು ನಿಮ್ಮ ಸಮ್ಮತಿಯ ಮೂಲಕ ನೀಡಬೇಕು ನಂತರ ಯು ಐ ಡಿ ಏ ಐ ನಿಮ್ಮ ಹೆಸರು , ವಯಸ್ಸು , ಲಿಂಗ ಮತ್ತು ಛಾಯಾಚಿತ್ರವನ್ನು ವಿದ್ಯುನ್ಮಾನದ ಮೂಲಕ ನೀಡುತ್ತದೆ . ಹೀಗೆ ಇ-ಕೆವೈಸಿ ಮೂಲಕ ನೀಡಿರುವ ಮಾಹಿತಿಯು ಅಕ್ರಮ ಹಣ ವರ್ಗಾವಣೆ ತಡೆಯುವಿಕೆ ನಿಯಮದಡಿಯಲ್ಲಿ ಅಧಿಕೃತವಾಗಿ ಸಿಂಧುವಾದ ದಾಖಲೆಯಾಗುತ್ತದೆ ಮತ್ತು ಇದು ಒಂದು ಅಧಿಕೃತವಾದ ಕೆ ವೈ ಸಿ ಪ್ರಕ್ರಿಯೆ ಆಗಿದೆ .
14. ಒಂದು ಬ್ಯಾಂಕ್ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಪರಿಚಯದ ಅಗತ್ಯವಿದೆಯೆ?
ಪ್ರತಿಕ್ರಿಯೆ: ಇಲ್ಲ , ಪರಿಚಯದ ಅಗತ್ಯವಿರುವುದಿಲ್ಲ
15. ನಾನು ಚೆನ್ನೈನಲ್ಲಿ ವಾಸ್ತವ್ಯವಿದ್ದೇನೆ ಆದರೆ ನನ್ನ ಹತ್ತಿರ ನವದೆಹಲಿಯ ವಾಸ್ತವ್ಯದ ಪುರಾವೆ ಇದೆ. ನಾನು ಈಗಲೂ ಚೆನ್ನೈನಲ್ಲಿ ಖಾತೆಯನ್ನು ತೆರೆಯಬಹುದೆ ?
ಪ್ರತಿಕ್ರಿಯೆ : ಹೌದು. ಅಧಿಕೃತವಾದ ಸಿಂಧುವಾದ ದಾಖಲೆಯ ವಿಳಾಸದ ಪುರಾವೆಯಲ್ಲಿ ನವದೆಹಲಿಯ ವಿಳಾಸ ಇದ್ದರೂ ಕೂಡ ನೀವು ಚೆನ್ನೈನಲ್ಲಿ ಖಾತೆಯನ್ನು ತೆರೆಯಬಹುದು. ನೀವು ನವದೆಹಲಿಯ ವಿಳಾಸ ಇರುವ ಅಧಿಕೃತವಾದ ಸಿಂಧುವಾದ ದಾಖಲೆಯನ್ನು ಸಲ್ಲಿಸಿ ಸಂಪರ್ಕ ಉದ್ದೇಶಗಳಿಗಾಗಿ ನಿಮ್ಮ ಚೆನ್ನೈ ವಿಳಾಸದ ಬಗ್ಗೆ ಘೋಷಣಾ ಪತ್ರ ನೀಡಬಹುದು.
16. ನನ್ನ ಪ್ರಸ್ತುತ ಬ್ಯಾಂಕ್ ಖಾತೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡಬಹುದೆ? ನಾನು ಮತ್ತೆ ಪೂರ್ಣ ಕೆ ವೈ ಸಿ ಪ್ರಕ್ರಿಯೆಗೆ ಒಳಗಾಗಬೇಕೆ ?
ಪ್ರತಿಕ್ರಿಯೆ : ಹೌದು . ನೀವು ಒಂದು ಬ್ಯಾಂಕ್ ಶಾಖೆಯಿಂದ ಅದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಖಾತೆಯನ್ನು ವರ್ಗಾಯಿಸಲು ಸಾಧ್ಯವಿದೆ. ಇಂತಹ ವರ್ಗಾವಣೆ ಸಮಯದಲ್ಲಿ ಪುನಃ ಕೆ ವೈ ಸಿ ಪ್ರಕ್ರಿಯೆಗೆ ಒಳಗಾಗುವ ಅಗತ್ಯವಿಲ್ಲ . ವಿಳಾಸ ಬದಲಾವಣೆ ಇದ್ದ ಪಕ್ಷದಲ್ಲಿ , ನೀವು ನಿಮ್ಮ ಪ್ರಸ್ತುತ ವಿಳಾಸದ ಕುರಿತು ಒಂದು ಘೋಷಣಾ ಪತ್ರ ಸಲ್ಲಿಸುವ ಅಗತ್ಯವಿದೆ. ವಿಳಾಸದ ಪುರಾವೆ ಆಗಿ ಸಲ್ಲಿಸಿರುವ “ಅಧಿಕೃತ ಸಿಂಧುವಾದ ದಾಖಲೆ “ ಯಲ್ಲಿರುವ ನಿಮ್ಮ ಶಾಶ್ವತ ವಿಳಾಸ ಅಥವಾ ಪ್ರಸ್ತುತ ವಿಳಾಸ ಎರಡೂ ಮಾನ್ಯ ವಿಳಾಸ ಆಗದಿದ್ದರೆ ನೀವು ನಿಮ್ಮ ಪ್ರಸ್ತುತ ಅಥವಾ ಶಾಶ್ವತ ವಿಳಾಸ ಹೊಂದಿರುವ “ಅಧಿಕೃತ ಸಿಂಧುವಾದ ದಾಖಲೆ “ಯನ್ನು ವಿಳಾಸದ ಪುರಾವೆಯಾಗಿ ಆರು ತಿಂಗಳೊಳಗೆ ಸಲ್ಲಿಸಬೇಕು. ಮತ್ತೊಂದು ಬ್ಯಾಂಕ್ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ನೀವು ಹೊಸದಾಗಿ ಕೆವೈಸಿ ಪ್ರಕ್ರಿಯೆಗೆ ಒಳಗಾಗುವ ಅಗತ್ಯವಿದೆ .
17. ಗುರುತು ಮತ್ತು ವಿಳಾಸದ ಪುರಾವೆಯನ್ನು ಒದಗಿಸಿ ತೆರೆದ ಖಾತೆಯನ್ನು ಹೊಂದಿರುವ ಬ್ಯಾಂಕಿನಲ್ಲಿ ಮತ್ತೆ ಖಾತೆ ತೆರೆಯುವಾಗ ಪ್ರತಿ ಖಾತೆಗೂ ಕೆ ವೈ ಸಿ ದಾಖಲೆಗಳನ್ನು ನೀಡುವ ಅಗತ್ಯವಿದೆಯೆ ?
ಪ್ರತಿಕ್ರಿಯೆ : ಇಲ್ಲ , ಕೆ ವೈ ಸಿ ದಾಖಲೆಗಳನ್ನು ಸಲ್ಲಿಸಿ ತೆರೆದಿರುವ ಖಾತೆಯನ್ನು(ಸಣ್ಣ ಖಾತೆಯನ್ನು ಹೊರತುಪಡಿಸಿ) ಹೊಂದಿರುವ ಬ್ಯಾಂಕಿನಲ್ಲಿ ಮತ್ತೊಂದು ಖಾತೆ ತೆರೆಯಲು ಪುನಃ ಕೆ ವೈ ಸಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.
18. ಯಾವ ಬ್ಯಾಂಕ್ ವೈವಹಾರಗಳಿಗೆ ಪ್ಯಾನ್ ಸಂಖ್ಯೆಯನ್ನು ಉಲ್ಲೇಖಿಸುವ ಅಗತ್ಯವಿದೆ ?
ಪ್ರತಿಕ್ರಿಯೆ : ರೂ . 50000/- ಕ್ಕಿಂತ ಹೆಚ್ಚು (ನಗದು ಅಥವಾ ನಗದು ರಹಿತ ) ವ್ಯವಹಾರ ಮಾಡುವ ಸಂದರ್ಭದಲ್ಲಿ ಪ್ಯಾನ್ ಸಂಖ್ಯೆಯನ್ನು ಉಲ್ಲೇಖಿಸುವ ಅಗತ್ಯವಿದೆ . ಪ್ಯಾನ್ ಸಂಖ್ಯೆ ಉಲ್ಲೇಖ ಅಗತ್ಯವಿರುವ ವಿವಿಧ ಸಂದರ್ಭಗಳ ಪೂರ್ಣ ಪಟ್ಟಿಯನ್ನುಈ ಕೆಳಗಿನ ಆದಾಯ ತೆರಿಗೆ ಇಲಾಖೆಯ ಜಾಲತಾಣದ ಯೂಆರ್‌ಎಲ್ ಲಿಂಕ್ ನಲ್ಲಿ ಕಾಣ ಬಹುದಾಗಿದೆ.
http://www.incometaxindia.gov.in/_layouts/15/dit/pages/viewer.aspx?grp=rule&cname=CMSID&cval=103120000000007541&searchFilter=&k=114b&IsDlg=0
19. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೂ ಕೆ ವೈ ಸಿ ಅನ್ವಯಿಸುತ್ತದೆಯೆ?
ಪ್ರತಿಕ್ರಿಯೆ : ಹೌದು. ಕ್ರೆಡಿಟ್ / ಸ್ಮಾರ್ಟ್ ಕಾರ್ಡುಗಳಿಗೆ ಮತ್ತು ಆಡ್ ಆನ್ / ಪೂರಕ ಕಾರ್ಡ್ ಗಳಿಗೂ ಕೂಡ ಕೆವೈಸಿ ಪ್ರಕ್ರಿಯೆ ಅನ್ವಯವಾಗುತ್ತದೆ. ಖಾತೆದಾರರಿಗೆ ಮಾತ್ರ ಡೆಬಿಟ್ ಕಾರ್ಡ್ ನೀಡಲಾಗುತ್ತದೆ ಮತ್ತು ಕೆ ವೈ ಸಿ ಪ್ರಕ್ರಿಯೆ ನಂತರವೆ ಖಾತೆಗಳನ್ನುತೆರೆಯುವ ಕಾರಣ ಡೆಬಿಟ್ ಕಾರ್ಡ್ ಪಡೆಯಲು ಪ್ರತ್ಯೇಕವಾಗಿ ಕೆ ವೈ ಸಿ ನೀಡುವ ಅಗತ್ಯವಿಲ್ಲ .
20. ನಾನು ಒಂದೂ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಆದರೆ ನನಗೆ ಹಣ ರವಾನೆ ಮಾಡುವ ಅಗತ್ಯವಿದೆ. ನನಗೂ ಕೆವೈಸಿ ಅನ್ವಯಿಸುವುದೇ?
ಪ್ರತಿಕ್ರಿಯೆ : ಹೌದು. ರೂ 50000/- ಮತ್ತು ಅದಕ್ಕಿಂತ ಹೆಚ್ಚು ಹಣದ ದೇಶೀಯ ರವಾನೆಗೆ ಹಾಗೂ ಎಲ್ಲ ವಿದೇಶಿ ರವಾನೆ ಮಾಡುವಾಗ ಕೆ ವೈ ಸಿ ಪ್ರಕ್ರಿಯೆಗೆ ಒಳಗಾಗುವ ಅಗತ್ಯವಿದೆ .
21. ನಾನು ನಗದು ನೀಡಿ ಡಿಮ್ಯಾಂಡ್ ಡ್ರಾಫ್ಟ್ / ಪೇಮೆಂಟ್ ಆರ್ಡರ್ / ಟ್ರಾವೆಲ್ಲೆರ್ಸ್ ಚೆಕ್ ನ್ನು ಖರೀದಿಸಬಹುದೆ?
ಪ್ರತಿಕ್ರಿಯೆ : ಹೌದು , ರೂ 50000/- ಕೆಳಗಿನ ಡಿಮ್ಯಾಂಡ್ ಡ್ರಾಫ್ಟ್ / ಪೇಮೆಂಟ್ ಆರ್ಡರ್ / ಟ್ರಾವೆಲ್ಲೆರ್ಸ್ ಚೆಕ್ ನ್ನು ನಗದು ನೀಡಿ ಖರೀದಿಸಬಹುದು ಆದರೆ ರೂ 50000/- ಕ್ಕಿಂತ ಹೆಚ್ಚಿನ ಡಿಮ್ಯಾಂಡ್ ಡ್ರಾಫ್ಟ್ / ಪೇಮೆಂಟ್ ಆರ್ಡರ್ / ಟ್ರಾವೆಲ್ಲೆರ್ಸ್ ಚೆಕ್ ನ್ನು ಮಾತ್ರ ಗ್ರಾಹಕನ ಖಾತೆಗೆ ಖರ್ಚು ಹಾಕಿ ಅಥವಾ ಚೆಕ್ಕಿನ ವಿರುದ್ಧ ಮಾತ್ರ ನೀಡಬಹುದು.
22. ಬ್ಯಾಂಕುಗಳಿಂದ ತೃತೀಯ ಘಟಕದ ಉತ್ಪನ್ನಗಳನ್ನು (ವಿಮೆ ಅಥವಾ ಮ್ಯೂಚುವಲ್ ಫಂಡ್ ಉತ್ಪನ್ನಗಳು) ಖರೀದಿ ಮಾಡುವ ಸಂದರ್ಭದಲ್ಲಿ ನಾನು ಬ್ಯಾಂಕಿಗೆ ಕೆ ವೈ ಸಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆಯೆ ?
ಪ್ರತಿಕ್ರಿಯೆ : ಹೌದು , ಬ್ಯಾಂಕ್ ಖಾತೆಯನ್ನು ಹೊಂದಿಲ್ಲದ ಎಲ್ಲ ಗ್ರಾಹಕರು (ವಾಕ್ ಇನ್ ಗ್ರಾಹಕರು) ರೂ . 50000/- ಅಥವಾ ಅದಕ್ಕಿಂತ ಹೆಚ್ಚಿನ ವೈವಹಾರಗಳನ್ನು ಒಳಗೊಂಡಿರುವ ತೃತೀಯ ಘಟಕದ ಉತ್ಪನ್ನಗಳನ್ನು (ವಿಮೆ ಅಥವಾ ಮ್ಯೂಚುಯಲ್ ಫಂಡ್ ಉತ್ಪನ್ನಗಳು) ಖರೀದಿ ಮಾಡುವ ಸಂದರ್ಭದಲ್ಲಿ ಗುರುತು ಮತ್ತು ವಿಳಾಸದ ಪುರಾವೆಗಳನ್ನು ನೀಡುವ ಅಗತ್ಯವಿದೆ. ತೃತೀಯ ಘಟಕದ ಉತ್ಪನ್ನಗಳನ್ನು ಖರೀದಿ ಮಾಡುವ ಬ್ಯಾಂಕಿನ ಸ್ವಂತ ಗ್ರಾಹಕರಿಗೆ ಕೆವೈಸಿ ಪ್ರಕ್ರಿಯೆಯ ಅಗತ್ಯ ಇರುವುದಿಲ್ಲ. ಗ್ರಾಹಕರ ಖಾತೆಗೆ ಖರ್ಚನ್ನು ಹಾಕಿ ಅಥವಾ ಚೆಕ್ಕಿನ ವಿರುದ್ಧ ನಿಧಿ/ಟ್ರಾವೆಲ್ಲೆರ್ಸ್ ಚೆಕ್ ನ ನೀಡಿಕೆ , ಚಿನ್ನ/ಬೆಳ್ಳಿ/ಪ್ಲಾಟಿನಂ ಮಾರಾಟ ಮತ್ತು ರೂ. 50000/- ಮತ್ತು ಅದಕ್ಕಿಂತ ಹೆಚ್ಚಿನ ವೈವಹಾರಕ್ಕೆ ಪ್ಯಾನ್ ಸಂಖ್ಯೆಯ ಉಲ್ಲೇಖದ ಸೂಚನೆಯು ತೃತೀಯ ಘಟಕದ ಉತ್ಪನ್ನಗಳನ್ನು (ವಿಮೆ ಅಥವಾ ಮ್ಯೂಚುವಲ್ ಫಂಡ್ ಉತ್ಪನ್ನಗಳು) ಖರೀದಿ ಮಾಡುವ ವಾಕ್ ಇನ್ ಗ್ರಾಹಕರಲ್ಲದೆ ಬ್ಯಾಂಕಿನ ಸ್ವಂತ ಗ್ರಾಹಕರಿಗೂ ಅನ್ವಯಿಸುತ್ತದೆ.
23. ನಾನು ಖಾತೆಯನ್ನು ತೆರೆದಾಗ ನನ್ನ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೂ ನನ್ನ ಬ್ಯಾಂಕ್ ಪುನಃ ಏಕೆ ಕೆವೈಸಿ ದಾಖಲೆಗಳನ್ನು ಕೇಳುತ್ತಿದೆ ?
ಪ್ರತಿಕ್ರಿಯೆ : ಬ್ಯಾಂಕುಗಳಿಗೆ ನಿಯತಕಾಲಿಕವಾಗಿ ಕೆವೈಸಿ ದಾಖಲೆಗಳನ್ನು ಪರಿಷ್ಕರಣೆಗೊಳಿಸುವ ಅಗತ್ಯವಿದೆ. ಇದೊಂದು ಮುಂಜಾಗರೂಕತೆಯ ಕ್ರಮವಾಗಿದೆ. ಇಂತಹ ನಿಯತಕಾಲಿಕ ಪರಿಷ್ಕರಣೆಯು ಸಂಭಾವ್ಯ ನಷ್ಟದ ಆಧಾರದ ಮೇಲೆ ಖಾತೆಯಿಂದ ಖಾತೆಗೆ ಬದಲಾಗುತ್ತದೆ. ದಾಖಲೆಗಳ ನಿಯತಕಾಲಿಕ ಪರಿಷ್ಕರಣೆಯು ಗ್ರಾಹಕರ ಖಾತೆಗಳಲ್ಲಾಗುವ ವಂಚನೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
24. ಕೆವೈಸಿ ದಾಖಲೆಗಳ ನಿಯತಕಾಲಿಕ ಪರಿಷ್ಕರಣೆ ಬಗ್ಗೆ ಇರುವ ನಿಯಮಗಳು ಯಾವವು?
ಪ್ರತಿಕ್ರಿಯೆ : ಬ್ಯಾಂಕಿಗಿರುವ ಸಂಭಾವ್ಯ ನಷ್ಟದ ಗ್ರಹಿಕೆಯ ಆಧಾರದ ಮೇಲೆ ಕೆವೈಸಿ ದಾಖಲೆಗಳ ನಿಯತಕಾಲಿಕ ಪರಿಷ್ಕಣೆಯನ್ನು ಶಿಫಾರಸು ಮಾಡಲಾಗಿದೆ.ಹೆಚ್ಚಿನ ಸಂಭಾವ್ಯ ನಷ್ಟದ ಗ್ರಾಹಕರಿಗೆ ಎರಡು ವರ್ಷಗಳಲ್ಲಿ ಒಮ್ಮೆಯಾದರೂ ಕೆವೈಸಿ ದಾಖಲೆಗಳ ನಿಯತಕಾಲಿಕ ಪರಿಷ್ಕರಣೆ ಮಾಡುವ ಅಗತ್ಯವಿದೆ. ಮಧ್ಯಮ ನಷ್ಟದ ಗ್ರಾಹಕರಿಗೆ ಎಂಟು ವರ್ಷಗಳಿಗೊಮ್ಮೆ ಹಾಗೂ ಕಡಿಮೆ ನಷ್ಟದ ಗ್ರಾಹಕರಿಗೆ ಹತ್ತು ವರ್ಷಗಳಿಗೊಮ್ಮೆ ಕೆವೈಸಿ ದಾಖಲೆಗಳ ನಿಯತಕಾಲಿಕ ಪರಿಷ್ಕರಣೆ ಮಾಡುವ ಅಗತ್ಯವಿದೆ. ಈ ಪ್ರಕ್ರಿಯೆಯು ಖಾತೆ ತೆರೆಯುವ ಸಂದರ್ಭದಲ್ಲಿದ್ದ ಕೆ ವೈ ಸಿ ವಿಧಿವಿಧಾನಗಳನ್ನು ಒಳಗೊಂಡಿರುತ್ತದೆ.
ಕೆವೈಸಿ ದಾಖಲೆಗಳ ನಿಯತಕಾಲಿಕ ಪರಿಷ್ಕರಣೆಯನ್ನು ಕಡಿಮೆ ಅಪಾಯದ ಗ್ರಾಹಕರ ಖಾತೆಗಳಿಗೂ ಮಾಡಬೇಕು. ಆದರೆ ಈ ಗ್ರಾಹಕರ ಗುರುತು (ಹೆಸರು , ಇತ್ಯಾದಿ ) ಅಥವಾ / ಮತ್ತು ಅವರ ವಿಳಾಸದ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದ ಪಕ್ಷದಲ್ಲಿ ನಿಯತಕಾಲಿಕ ಪರಿಷ್ಕರಣೆ ಸಮಯದಲ್ಲಿ “ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ” ಎಂಬ ಸ್ವದೃಢೀಕರಣ ಪತ್ರವನ್ನು ಸಲ್ಲಿಸಲು ಬ್ಯಾಂಕುಗಳು ಗ್ರಾಹಕರಿಗೆ ಕೇಳಬಹುದು. ಬ್ಯಾಂಕ್ ನಿಯತಕಾಲಿಕ ಪರಿಷ್ಕರಣೆಗೆ ಈ ಗ್ರಾಹಕರಿಂದ “ಅಧಿಕೃತ ಸಿಂಧುವಾದ ದಾಖಲೆ ಯನ್ನು ಕೇಳದೆ ಇರಬಹುದು.
ಕಡಿಮೆ ಸಂಭಾವ್ಯ ನಷ್ಟದ ಗ್ರಾಹಕರ ವಿಳಾಸ ಬದಲಾದಲ್ಲಿ ಅವರು ದಾಖಲೆಯ (ವಿಳಾಸದ ಪುರಾವೆ) ಅಧಿಕೃತ ಪ್ರತಿಯನ್ನು ಅಂಚೆ ಮುಖಾಂತರ ಕಳುಹಿಸಬಹುದು. ಕಡಿಮೆ ಸಂಭಾವ್ಯ ನಷ್ಟದ ಗ್ರಾಹಕರ ಉಪಸ್ಥಿತಿ ನಿಯತಕಾಲಿಕ ಪರಿಷ್ಕರಣೆ ಸಮಯದಲ್ಲಿ ಅಗತ್ಯವಿಲ್ಲ.
ಅಪ್ರಾಪ್ತ ವಯಸ್ಸಿನ ಗ್ರಾಹಕರು ವಯಸ್ಕರಾದ ನಂತರ ತಮ್ಮ ತಾಜಾ ಛಾಯಾಚಿತ್ರ ಸಲ್ಲಿಸುವ ಅಗತ್ಯವಿದೆ.
25. ನಿಯತಕಾಲಿಕ ಪರಿಷ್ಕರಣೆಯ ಸಮಯದಲ್ಲಿ ಕೆ ವೈ ಸಿ ದಾಖಲೆಗಳನ್ನು ನೀಡದಿದ್ದರೆ ಆಗುವ ಪರಿಣಾಮವೇನು?
ಪ್ರತಿಕ್ರಿಯೆ : ನೀವು ನಿಯತಕಾಲಿಕ ಪರಿಷ್ಕರಣೆಯ ಸಮಯದಲ್ಲಿ ಕೆ ವೈ ಸಿ ದಾಖಲೆಗಳನ್ನು ನೀಡದಿದ್ದರೆ ಬ್ಯಾಂಕು ನಿಮ್ಮ ಖಾತೆಯನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ . ಖಾತೆಯನ್ನು ಮುಚ್ಚುವ ಮೊದಲು ಬ್ಯಾಂಕ್ ನಿಮ್ಮ ಖಾತೆಯನ್ನು “ಭಾಗಶಃ ಸ್ಥಗಿತಗೊಳಿಸಬಹುದು “ (ಅಂದರೆ ಆರಂಭದಲ್ಲಿ ಕೇವಲ ಖಾತೆಯಲ್ಲಿ ಜಮಾಗೆ ಅವಕಾಶ ನೀಡಿ ಮತ್ತು ಖರ್ಚಿಗೆ ನಿರ್ಬಂಧ ಹಾಕುವುದು ಮತ್ತು ಖಾತೆಯನ್ನು ಮುಚ್ಚಿ ಹಾಕಿ ನಿಮ್ಮ ಹಣವನ್ನು ಮರಳಿ ಪಡೆಯಲು ಆಯ್ಕೆ ನೀಡುವುದು ) ನಂತರ ಖಾತೆಯಲ್ಲಿ ಜಮಾಗೂ ಅವಕಾಶ ನೀಡಲಾಗುವುದಿಲ್ಲ .ನಿಮಗೆ ಸೂಚನೆ ನೀಡಿದ ನಂತರವೆ ಬ್ಯಾಂಕ್ ಖಾತೆಯನ್ನು “ಭಾಗಶಃ ಸ್ಥಗಿತಗೊಳಿಸುತ್ತದೆ “ .
26. “ಭಾಗಶಃ ಸ್ಥಗಿತಗೊಳಿಸುವಿಕೆ” ಹೇಗೆ ವಿಧಿಸಲಾಗುತ್ತದೆ?
ಪ್ರತಿಕ್ರಿಯೆ : ಭಾಗಶಃ ಸ್ಥಗಿತಗೊಳಿಸುವಿಕೆ ಈ ಕೆಳಗಿನ ರೀತಿಯಲ್ಲಿ ವಿಧಿಸಲಾಗುತ್ತದೆ
-
ಆರಂಭದಲ್ಲಿ ಖಾತೆಯ ಭಾಗಶಃ ಸ್ಥಗಿತಗೊಳಿಸುವಿಕೆಯ ಮುನ್ನ ಬ್ಯಾಂಕ್ ತನ್ನ ಗ್ರಾಹಕರಿಗೆ ಮೂರು ತಿಂಗಳ ಸೂಚನೆಯನ್ನು ನೀಡಬೇಕಾಗುತ್ತದೆ.
-
ನಂತರ ಮೂರು ತಿಂಗಳ ಜ್ಞಾಪನೆಯನ್ನು ಬ್ಯಾಂಕ್ ನೀಡುತ್ತದೆ
-
ತದನಂತರ ಖಾತೆಯಲ್ಲಿ ಜಮಾಗೆ ಅವಕಾಶ ನೀಡಿ ಮತ್ತು ಖರ್ಚಿಗೆ ನಿರ್ಬಂಧ ಹಾಕಿ ಖಾತೆಯನ್ನು ಮುಚ್ಚಿ ಹಾಕುವ ಅವಕಾಶವನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತದೆ.
-
ಖಾತೆಯ ಭಾಗಶಃ ಸ್ಥಗಿತಗೊಳಿಸುವಿಕೆಯ ಆರಂಭದ ಆರು ತಿಂಗಳ ಕಾಲದವರೆಗೂ ಕೆ ವೈ ಸಿ ನೀಡದಿದ್ದರೆ ಬ್ಯಾಂಕ್ ಎಲ್ಲ ರೀತಿಯ ಜಮಾ / ಖರ್ಚುನ್ನು ರದ್ದುಪಡಿಸಿ ಖಾತೆಯನ್ನು “ನಿಷ್ಕ್ರಿಯ ಖಾತೆ” ಎಂದು ವರ್ಗೀಕರಿಸುತ್ತದೆ.
ಏತನ್ಮಧ್ಯೆ, ಖಾತೆದಾರರು ಕೆ ವೈ ಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಖಾತೆಯನ್ನು ಪುನಶ್ಚೇತನ ಮಾಡಬಹುದು. |